ಐಸೊಮೆರಿಸಂ (ಭೌತವಿಜ್ಞಾನದಲ್ಲಿ): ಎರಡು ಅಥವಾ ಅನೇಕ ಪರಮಾಣು ನ್ಯೂಕ್ಲಿಯಸ್ ಜಾತಿಗಳು (ನ್ಯೂಕ್ಲೈಡ್ಸ್‌) ಪರಮಾಣು ಸಂಖ್ಯೆಯಲ್ಲಾಗಲೀ (ಅಟಾಮಿಕ್ ನಂಬರ್) ದ್ರವ್ಯಮಾನ ಸಂಖ್ಯೆಯಲ್ಲಾಗಲೀ (ಮಾಸ್ನಂಬರ್) ಯಾವ ವ್ಯತ್ಯಾಸವನ್ನೂ ತೋರದೆ ತಮ್ಮ ಶಕ್ತಿಹಂತಗಳಲ್ಲಿ (ಎನರ್ಜಿಲೆವಲ್ಸ್‌) ಹಾಗೂ ವಿಕಿರಣತೆಯಿಂದ ಕ್ಷಯಿಸುವ ರೀತಿಗಳಲ್ಲಿ (ರೇಡಿಯೊ ಆಕ್ಟಿವ್ಡಿಕೇ) ಮುಖ್ಯವಾಗಿ ಅರ್ಧಾಯುಗಳಲ್ಲಿ ವ್ಯತ್ಯಾಸ ತೋರುವಿಕೆ. ಅಂಥ ನ್ಯೂಕ್ಲಿಯಸ್ ಜಾತಿಗಳಿಗೆ ನ್ಯೂಕ್ಲಿಯರ್ ಐಸೊಮರುಗಳೆಂದು ಹೆಸರು.

ಪರಮಾಣುಸಂಖ್ಯೆ ಒಂದೇ ಇದ್ದು ದ್ರವ್ಯಮಾನ ಸಂಖ್ಯೆ ಬೇರೆ ಬೇರೆ ಇದ್ದರೆ ಅವನ್ನು ಐಸೊಟೋಪುಗಳೆಂದೂ, ದ್ರವ್ಯಮಾನ ಸಂಖ್ಯೆ ಒಂದೇ ಇದ್ದು ಪರಮಾಣು ಸಂಖ್ಯೆ ಬೇರೆಬೇರೆಯಾಗಿದ್ದರೆ ಅವನ್ನು ಐಸೊಬಾರುಗಳೆಂದೂ ಕರೆಯುವುದು ಸರಿಯಷ್ಟೆ. ನ್ಯೂಕ್ಲಿಯಸ್ ಐಸೊಮರುಗಳು ಐಸೊಟೋಪುಗಳೂ ಅಲ್ಲ, ಐಸೊಬಾರುಗಳೂ ಅಲ್ಲ, ಅವುಗಳಲ್ಲಿನ ಪ್ರೋಟಾನುಗಳ ಸಂಖ್ಯೆ ಒಂದೇ ಆಗಿರುವುದರಿಂದ ಪರಮಾಣುಸಂಖ್ಯೆಯಲ್ಲಿ ವ್ಯತ್ಯಾಸವಿಲ್ಲ. ನ್ಯೂಟ್ರಾನುಗಳ ಸಂಖ್ಯೆಯೂ ಒಂದೇ ಆಗಿರುವುದರಿಂದ ದ್ರವ್ಯಮಾನ ಸಂಖ್ಯೆಯಲ್ಲೂ ವ್ಯತ್ಯಾಸ ವಿಲ್ಲ. ಆದರೆ ಅವುಗಳಲ್ಲಿ ಅಡಗಿರುವ ಶಕ್ತಿಯ ಮೊತ್ತ ಬೇರೆ ಬೇರೆ. ಮೇಲಿನ ಶಕ್ತಿಹಂತ ದಲ್ಲಿರುವ ನ್ಯೂಕ್ಲಿಯರ್ ಐಸೊಮರುಗಳಲ್ಲಿ ಸಾಮಾನ್ಯವಾಗಿ ಭೂಹಂತಕ್ಕಿಂತ (ಗ್ರೌಂಡ್ ಸ್ಟೇಟ್) ಹಲವಾರು ಸಾವಿರ ಅಥವಾ ಮಿಲಿಯನ್ ಎಲೆಕ್ಟ್ರಾನ್ ವೋಲ್ಟ್‌ ಹೆಚ್ಚುಶಕ್ತಿ ಇರುತ್ತದೆ.

ಅಧಿಕ ಶಕ್ತಿ ಇರುವ ಉದ್ರಿಕ್ತ ಪರಮಾಣು ನ್ಯೂಕ್ಲಿಯಸ್ ಸಹಜವಾಗಿಯೇ ಶಕ್ತಿಯನ್ನು ಕಳೆದುಕೊಳ್ಳಬೇಕಷ್ಟೆ. ಅವು ಗ್ಯಾಮಾ ಕಿರಣದ ರೂಪದಲ್ಲಿ ಶಕ್ತಿಯನ್ನು ಹೊರಸೂಸುವುವು. ಕೆಲವು ವೇಳೆ ಎಲೆಕ್ಟ್ರಾನ್ ಜೋಡಿಯನ್ನು ಹೊರಸೂಸುವುದು ಉಂಟು. ಅದರ ಪರಿಣಾಮವಾಗಿ ತಲುಪಿದ ಭೂಹಂತ ಸ್ಥಿರವಾದುದಿರಬಹುದು (ಉದಾ. 107ಂg) ಇಲ್ಲವೆ. ಅದೂ ಅಸ್ಥಿರವಿರಬಹುದು (ಉದಾ. 69Zಟಿ). 10-6 ಸೆಕೆಂಡಿನಿಂದ ಹಲವಾರು ವರ್ಷಗಳವರೆಗಿನ ಅರ್ಧಾಯುಗಳಿರುವ 200ಕ್ಕೂ ಹೆಚ್ಚು ಸಂಖ್ಯೆಯ ನ್ಯೂಕ್ಲಿಯರ್ ಐಸೊಮರುಗಳು ಇದುವರೆಗೆ ಗೊತ್ತಾಗಿದೆ.                             (ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ